ಚಲನಚಿತ್ರ ಶಿಕ್ಷಣ ತರಬೇತಿ

ಫಿಲಂ ಅಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್ (ಎಫ್.ಟಿ.ಐ.ಟಿ) : ಪುಣೆಯಲ್ಲಿ ಸ್ಥಾಪನೆಗೊಂಡ ಫಿಲಂ ಅಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್ ಚಿತ್ರ ಜಗತ್ತಿಗೆ ಅಗತ್ಯವಾದ ಕಲಾವಿದರು ಹಾಗೂ ತಾಂತ್ರಿಕ ತಜ್ಞರಿಗೆ ಶಿಕ್ಷಣ ಹಾಗೂ ತರಬೇತಿ ನೀಡುತ್ತಿದೆ. ಅಭಿನಯವಷ್ಟೇ ಅಲ್ಲದೆ ಛಾಯಾಗ್ರಹಣ, ಸಂಕಲನ, ನಿರ್ದೇಶನ, ಚಿತ್ರನಾಟಕ ರಚನೆ ಮತ್ತಿತರ ತಾಂತ್ರಿಕ ವಿಭಾಗಗಳಲ್ಲಿ ತರಬೇತಿ ನೀಡುತ್ತಿದ್ದು, ಅನೇಕ ತಂತ್ರಜ್ಞರು ಇಲ್ಲಿ ರೂಪುಗೊಂಡಿದ್ದಾರೆ. ಚಿತ್ರರಂಗದಲ್ಲಿ ಹೆಸರಾದ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಈ ಇನ್‍ಸ್ಟಿಟ್ಯೂಟಿನಲ್ಲಿ ಶಿಕ್ಷಣ ಪಡೆದು ಪದವೀಧರರಾದವರು.

	ಕನ್ನಡ ಚಿತ್ರರಣಗದಲ್ಲಿಯೂ ಈ ಸಂಸ್ಥೆಯಿಂದ ತರಬೇತಿ ಪಡೆದು ಪದವೀಧರರಾಗಿ ಬಂದ ಹಲವರು ಮಹತ್ವದ ಸಾಧನೆಗಳ ದಾಖಲೆ ಮಾಡಿದ್ದಾರೆ. ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಕೆ.ಎಂ.ಶಂಕರಪ್ಪ, ಛಾಯಾಗ್ರಾಹಕರಾದ ಯು.ಎಂಎನ್.ಷರೀಫ್, ಎಸ್ ರಾಮಚಂದ್ರ, ತಾರೆ ಜಯಲಕ್ಷ್ಮಿ, ಸಂಕಲನಕಾರ ಉಮೇಶ್ ಕುಲಕರ್ಣಿ ಹೀಗೆ ಅನೇಕರು ಈ ಸಂಸ್ಥೆಯಿಂದ ಪದವಿಧರರು ಕನ್ನಡ ಚಿತ್ರರಂಗದ ಮೌಲ್ಯ ವರ್ಧಿಸಿದ್ದಾರೆ.

	ಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ, ಅಭಿನಯ, ಛಾಯಗ್ರಹಣ ಮತತಿತರ ವಿಭಾಗಗಳಲ್ಲಿ ಶಿಕ್ಷಣ ನೀಡುತ್ತಿರುವ ಈ ಇನ್‍ಸ್ಟಿಟ್ಯೂಟ್‍ನಲ್ಲಿ ಟೆಲಿವಿಷನ್ ಮಾಧ್ಯಮದ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ಮೂರು ವರ್ಷಗಳ ಪದವಿ ಶಿಕ್ಷನ ಹಾಗೂ ಒಂದು ವರ್ಷದವಧಿಯ ಸರ್ಟಿಫಿಕೇಟ್ ಕೋರ್ಸ್‍ಗಳಿವೆ. 

	ಕಳೆದ ಸಾಲಿನಿಂದ (2004-05) ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್‍ನ್ನು ಅಭಿನಯ ವಿಭಾಗದಲ್ಲಿ ಆರಂಭಿಸಲಾಗಿದ್ದು, ಒಂದು ವರ್ಷದವಧಿಯ ಟೆಲಿವಿಷನ್ ಕೋರ್ಸ್, ಒಂದು ವರ್ಷದ ಅವಧಿಯ ಚಿತ್ರನಾಟಕ ರಚನೆಯ ಕೋರ್ಸ್‍ಗಳು ಈ ಇನ್‍ಸ್ಟಿಟ್ಯೂಟ್‍ನಲ್ಲಿವೆ. ಇದುವರೆಗೂ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ದೂರದರ್ಶನದ ಟ್ರೈನಿಗಳಿಗೆ ತರಬೇತಿ ನೀಡಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಸೃಷ್ಟಿಸಿದ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ಮೆಚ್ಚುಗೆ ಪಡೆದಿವೆ. ಪ್ರತಿವರ್ಷವೂ ಪುಣೆಯಲ್ಲಿರುವ ನ್ಯಾಷನಲ್ ಫಿಲಂ ಆರ್ಚೀವ್ ಆಫ್ ಇಂಡಿಯಾ ಸಹಯೋಗದೊಂದಿಗೆ ಈ ಸಂಸ್ಥೆಯ ನಾಲ್ಕು ವಾರಗಳವಧಿಯ ಫಿಲಂ ಅಪ್ರೀಸಿಯೇಷನ್ ಕುರಿತ ಬೇಸಿಗೆ ಕೋರ್ಸ್ ಈ ಇನ್‍ಸ್ಟಿಟ್ಯೂಟಿನ ಒಂದು ಹೆಗ್ಗಳಿಕೆಯಾಗಿದೆ. 

	ಸತ್ಯಜಿತ್ ರೇ ತರಬೇತಿ ಸಂಸ್ಥೆ : ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್‍ನಂತೆಯೇ ಕೊಲ್ಕತ್ತದಲ್ಲಿ ಸತ್ಯಜಿತ್ ರೇ ಫಿಲಂ ಅಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್. 1995ರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಪಶ್ಚಿಮಬಂಗಾಳದಲ್ಲಿ ನೊಂದಾಯಿತಗೊಂಡ ಸಂಸ್ಥೆ. ಚಲನಚಿತ್ರ ನಿರ್ದೇಶನ, ಚಿತ್ರನಾಟಕರಚನೆ, ಛಾಯಗ್ರಹಣ, ಫಿಲಂ ಹಾಗೂ ವಿಡಿಯೋ ಸಂಕಲನ ಹಾಗೂ ಶಬ್ದಗ್ರಹಣ ವಿಭಾಗಗಳಲ್ಲಿ 3 ವರ್ಷಗಳವಧಿಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳನ್ನು ನಡೆಸುತ್ತಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಸೃಷ್ಟಿಸಿದ "ಸುಂದರ್ ಜೀಬಾನ್"-ಡಿಪ್ಲೊಮ ಫಿಲಂ 50ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಮತ್ತೊಂದು ಡಿಪ್ಲೊಮಾ ಚಿತ್ರ "ಖೋಜ್" 8ನೇ ಮುಂಬೈ ಚಿತ್ರೋತ್ಸವ ಪ್ರಶಸ್ತಿ ಪಡೆದಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಚಿತ್ರಗಳಾಗಿ ಪ್ರದರ್ಶನ ಕಂಡಿವೆ. 

	ತಮಿಳುನಾಡಿನಲ್ಲಿ : ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್‍ನ ಸ್ಫೂರ್ತಿಯಲ್ಲಿ ಮುಂಬೈನಲ್ಲಿಯೇ ಹಲವು ಮಂದಿ ಚಿತ್ರದ್ಯೋಮದ ವ್ಯಕ್ತಿಗಳು ಫಿಲಂ ಇನ್‍ಸ್ಟಿಟ್ಯೂಟ್‍ಗಳನ್ನು ಸ್ಥಾಪಿಸಿದರು. ಹಾಗೆಯೇ ಚೆನ್ನೈನಲ್ಲಿರುವ ದಕ್ಷಿಣಭಾರತ ಚಲನಚಿತ್ರವು ವಾಣಿಜ್ಯಮಂಡಳಿಯೂ ಫಿಲಂ ಇನ್‍ಸ್ಟಿಟ್ಯೂಟೊಂದನ್ನು ತೆರೆಯಿತು. ಈ ಶಿಕ್ಷಣ ತರಬೇತಿ ಸಂಸ್ಥೆಯ ಮೂಲಕವು ಅನೇಕ ಮಂದಿ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರರಂಗದಲ್ಲಿ ಹೆಸರಾದರು. ಅವರಲ್ಲಿ ಕನ್ನಡಿಗರ ಸಂಖ್ಯೆಯೇನೂ ಕಡಿಮೆ ಇಲ್ಲ. ತಮಿಳಿನ ಸೂಪರ್‍ಸ್ಟಾರ್ ಎನಿಸಿರುವ ಕನ್ನಡಿಗ ರಜನೀಕಾಂತ್ ತರಬೇತಿಪಡೆದುದೂ ಇಲ್ಲಿಯೇ. ಕನ್ನಡ ನಟ ಅಶೋಕ, ನಟಿ ಹೇಮಾಚೌಧರಿ, ನಿರ್ದೇಶಕ ರವೀಂದ್ರನಾಥ್ ಮತ್ತು ಅನೇಕರು ಈ ಸಂಸ್ಥೆಯಲ್ಲಿ ಶಿಕ್ಷಣ ತರಬೇತಿ ಪಡೆದರು. ಕನ್ನಡದ ಜನಪ್ರಿಯ ನಟ ಶಿವರಾಜಕುಮಾರ್ ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿ. 

	ಬೆಂಗಳೂರಿನಲ್ಲಿ : ಬೆಂಗಳೂರು ಮಹಾನಗರದಲ್ಲಿ ಏಳೆಂಟು ದಶಕಗಳ ಹಿಂದೆಯೇ ಶ್ರೀಜಯಚಾಮರಾಜೇಂದ್ರ ಆಕ್ಯುಫೇಷನಲ್ ಇನ್‍ಸ್ಟಿಟ್ಯೂಟ್-ವೃತ್ತಿ ಶಿಕ್ಷಣ ಶಾಲೆಯಲ್ಲಿ ಚಲನಚಿತ್ರ ಛಾಯಾಗ್ರಹಣ ಹಾಗೂ ಶಬ್ದಗ್ರಹಣ ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಬೆಂಗಳೂರಿನ ಆ ಎಸ್.ಜೆ.ಪಿ.ಯಲ್ಲಿ ಶಿಕ್ಷಣ ಪಡೆದ ಹಲವರು ಭಾರತೀಯ ವಿವಿಧ ಭಾಷಾ ಚಿತ್ರರಂಗಗಳಲ್ಲಿ ಹೆಸರಾದ ತಂತ್ರಜ್ಞರೆನಿಸಿದ್ದಾರೆ. ಹಿಂದಿ ಚಿತ್ರ ಜಗತ್ತಿನ ಜಗದ್ವಿಖ್ಯಾತ ಛಾಯಗ್ರಾಹಕ ವಿ.ಕೆ.ಮೂರ್ತಿ, ಡಿ.ವಿ.ರಾಜಾರಾಂ, ಆರ್.ಎನ್.ಕೆ.ಪ್ರಸಾದ್, ಗೌರಿಶಂಕರ್, ಆರ್. ಮಂಜುನಾಥ್, ಎನ್.ಜಿ.ರಾವ್ ಮತ್ತಿತರು ಈ ಶಾಲೆಯ ಡಿಪ್ಲೊಮಾ ಪದವೀಧರರು. ಚಿತ್ರನಿರ್ದೇಶಕ ಹಾಗೂ ಆರ್.ಎನ್.ಜಯಗೋಪಾಲ್ ಈ ಶಾಲೆಯ ಸೌಂಡ್ ಎಂಜಿನಿಯರಿಂಗ್ ಡಿಪ್ಲೊಮಾ ಪಡೆದರು. ಕಾಲಾನಂತರದಲ್ಲಿ ಶ್ರೀ ಜಯಚಾಮರಾಜೇಂದ್ರ ಆಕ್ಯುಪೇಷನಲ್ ಇನ್‍ಸ್ಟಿಟ್ಯೂಟ್ ಎಂದು ಹೆಸರಾಗಿದ್ದ ಸಂಸ್ಥೆಯ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಎಂದಾಯಿತು. ಅಲ್ಲದೆ ಕರ್ನಾಟಕ ರಾಜ್ಯಸರ್ಕಾರವು "ಚಿತ್ರನಗರಿ" ನಿರ್ಮಾಣಕ್ಕೆಂದು ಹೆಸರಘಟ್ಟದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಈ ಇನ್‍ಸ್ಟಿಟ್ಯೂಟಿನ ಚಲನಚಿತ್ರ ವಿಭಾಗ ಸಂಪೂರ್ಣವಾಗಿ ಹೆಸರಘಟ್ಟಕ್ಕೆ ಸ್ಥಳಾಂತರವಾಯಿತು. ಇದೀಗ ಅಲ್ಲಿ ಫಿಲಂ ಅಂಡ್ ಟೆಲಿವಿಷನ್‍ನಲ್ಲಿ ಶಿಕ್ಷಣ ಹಾಗೂ ತರಬೇತಿ ನೀಡುವ "ಫಿಲಂ ಅಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್" ರೂಪುಗೊಂಡು, ಯಶಸ್ವಿಯಾಗಿ ನಡೆಯುತ್ತಿದೆ. 

	ಸುಚಿತ್ರ ಫಿಲಂ ಸೊಸೈಟಿ : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಯುಗ ಉನ್ನತಿಯಲ್ಲಿದ್ದಾಗ ಬೆಂಗಳೂರಿನಲ್ಲಿ ಚಲನಚಿತ್ರ ಸಮಾಜಗಳೂ ಹುಟ್ಟಿಕೊಂಡವು. ಸುಚಿತ್ರ್ರಾ ಫಿಲಂ ಸೊಸೈಟಿ ಅತ್ಯಂತ ಸುವ್ಯವಿಸ್ಥಿತವಾಗಿ ಬೆಳೆದು ಬಂದಿರುವ ಚಿತ್ರಸಮಾಜವೆನಿಸಿದೆ. ದೇಶ-ವಿದೇಶಗಳ ಉತ್ತಮ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಸುಚಿತ್ರ ಫಿಲಂ ಸೊಸೈಟಿ ತನ್ನದೇ ಆದ ಚಿತ್ರಪ್ರದರ್ಶನ ಮಂದಿರವನ್ನು ಹೊಂದಿದ್ದು, ಚಲನಚಿತ್ರಗಳ ಸೆನ್ಸಾರ್ ಮಂಡಳಿಯವರೂ ಆ ಥಿಯೇಟರ್‍ನ್ನು ಬಳಸಿಕೊಳ್ಳುತ್ತಿದ್ದಾರೆ. ಚಲನಚಿತ್ರ ಪ್ರದರ್ಶನ ಮಾತ್ರವಲ್ಲದೆ, ಸಂವಾದ-ಪರಿಚಯ ಮತ್ತಿತರ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸುಚಿತ್ರಾ ತನ್ನದೇ ಆದ, ಇನ್ ಹೌಸ್ ನಿಯತಕಾಲಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. 

	ಆರಂಭದಲ್ಲಿ ಬೆಂಗಳೂರಿನಲ್ಲಿ ಹಲಾವರು ಚಿತ್ರ ಸಮಾಜಗಳು ಹುಟ್ಟಿಕೊಂಡವಾದರೂ ಅವುಗಳ ಚಟುವಟಿಕೆ ಗಣನೀಯ ವಾದುದೇನಲ್ಲ. ಎಷ್ಟೋ ಫಿಲಂ ಸೊಸೈಟಿಗಳು ಸ್ಥಗಿತವಾಗಿರುವುದೂ ಉಂಟು.
ಮೂಲಭೂತ ಕಾರ್ಯಗಳು : ಚಲನಚಿತ್ರೋದ್ಯಮದ ಮೂಲಭೂತ ಸೌಕರ್ಯಗಳಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಅಗತ್ಯವಾದ ಸ್ಟುಡಿಯೋಗಳು, ರೆಕಾರ್ಡಿಂಗ್ ಹಾಗೂ ರೀ ರೆಕಾರ್ಡಿಂಗ್ ಸ್ಟುಡಿಯೋಗಳೂ ಪ್ರಮುಖವದವು. ಮೈಸೂರಿನಲ್ಲಿ ಏಳು ಫ್ಲೋರುಗಳ ಬೃಹತ್ ಸ್ಟುಡಿಯೋವೆನಿಸಿ ಅನೇಕ ಚಿತ್ರಗಳ ಸೃಷ್ಟಿಗೆ ಅವಕಾಶವಾಗಿದ್ದ ಪ್ರಿಮಿಯರ್ ಸ್ಟುಡಿಯೋ ಇದೀಗ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಅಲ್ಲಿ ಬೇರೆ ಉದ್ದಿಮೆ ನೆಲೆಗೊಳ್ಳುತ್ತಿದೆ. 						(ಶ್ರೀಕೃಪಾ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ